ಚಪ್ಪಟೆ ಮೀನುಗಳು-
ಪ್ಲೂರೊನೆಕ್ಟಫಾರ್ಮೀಸ್ (ಹೆಟಿರೋಸೊಮೇಟ) ಗಣದ ಬೋತಿಡೀ, ಪ್ಲೂರೊನೆಕ್ಟಡೀ, ಸೋಲೈಯಿಡೀ ಮತ್ತು ಸೈನೋಗ್ಲಾಸಿಡಿ ಕುಟುಂಬಗಳಿಗೆ ಸೇರಿದ, ನಂಗು, ಟರ್ಬಟ್, ಹ್ಯಾಲಿಬಟ್ ಮುಂತಾದ ಸಾಗರವಾಸಿ ಮೀನುಗಳಿಗಿರುವ ಸಾಮಾನ್ಯ ಹೆಸರು (ಫ್ಲಾಟ್ ಫಿಷಸ್). ಹೆಸರೇ ಸೂಚಿಸುವಂತೆ ಚಪ್ಪಟೆಯಾಗಿರುವ ಇದಕ್ಕೆ ಎರಡು ಕಣ್ಣುಗಳು ತಲೆಯ ಒಂದೇ ಪಾಶ್ರ್ವದಲ್ಲಿರುವುದರಿಂದ ಇವು ಇತರ ಮೀನುಗಳಿಗಿಂತ ಭಿನ್ನವಾಗಿವೆ. ಪ್ರೌಢಜೀವಿಗಳು ಕಣ್ಣಿರುವ ಪಾಶ್ರ್ವವನ್ನು ಮೇಲ್ಮುಖ ಮಾಡಿಕೊಂಡು ನೀರಿನ ತಳದಲ್ಲಿ ವಾಸಿಸುತ್ತವೆ. ದೇಹದ ಈ ಪಾಶ್ರ್ವದಲ್ಲಿ ವಿವಿಧ ಬಣ್ಣಗಳನ್ನು ಕಾಣಬಹುದು. ಇವು ಸಾಧಾರಣವಾಗಿ ಸಾಗರತಳದ ಬಣ್ಣವನ್ನೇ ಹೋಲುತ್ತವೆ. ನೆಲದ ಕಡೆ ತಿರುಗಿರುವ ಪಾಶ್ರ್ವ ಬಿಳುಪಾಗಿರುತ್ತದೆ. ಈ ಭಾಗವನ್ನು ಬೆಳಕಿಗೆ ಒಡ್ಡಿದಾಗ ಅಲ್ಲಿ ಸ್ವಲ್ಪಮಟ್ಟಿನ ಬಣ್ಣ ಕಾಣಿಸಿಕೊಳ್ಳುವುದುಂಟು.

ಮೊಟ್ಟೆಯೊಡೆದು ಬರುವ ಮರಿಮೀನುಗಳು ಇತರ ಜಾತಿಯ ಮೀನಿನ ಮರಿಗಳಂತೆಯೇ ಒಂದೊಂದು ಪಾಶ್ರ್ವದಲ್ಲೂ ಒಂದೊಂದು ಕಣ್ಣನ್ನು ಹೊಂದಿದ್ದು ಸಮರೂಪದ್ದಾಗಿರುತ್ತವೆ. ಇವು ಮೊದಮೊದಲು ನೀರಿನಲ್ಲಿ ಈಜಾಡುತ್ತ ಕಾಲ ಕಳೆಯುತ್ತವೆ. ಕಾಲಕ್ರಮದಲ್ಲಿ ಒಂದು ಪಾಶ್ರ್ವದ ಕಣ್ಣು, ತಲೆಯನ್ನು ಸುತ್ತುವರಿದುಕೊಂಡು ಇನ್ನೊಂದು ಪಾಶ್ರ್ವಕ್ಕೆ ಸಾಗಿ ಬರುತ್ತದೆ; ಕೆಲವು ರೆಕ್ಕೆಗಳು ಸ್ಥಾನ ಬದಲಾಯಿಸುತ್ತವೆ. ಕಡೆಗೆ, ಮೀನುಗಳು ಎರಡು ಕಣ್ಣುಗಳಿರುವ ಪಾಶ್ರ್ವವನ್ನು ಮೇಲ್ಮುಖ ಮಾಡಿಕೊಂಡು ನೀರಿನ ತಳ ಸೇರುತ್ತವೆ. ಅನೇಕ ಚಪ್ಪಟೆ ಮೀನುಗಳಲ್ಲಿ ಬೆನ್ನಿನ ರೆಕ್ಕೆ ತಲೆಯತನಕ ಮುಂದಕ್ಕೆ ಚಾಚಿ ಬೆಳೆದುಕೊಳ್ಳುತ್ತದೆ. ಕಣ್ಣುಗಳು ತಲೆಯ ಒಂದೇ ಪಾಶ್ರ್ವದಲ್ಲಿದ್ದರೂ ಬೇರೆ ಬೇರೆ ದಿಕ್ಕಿನಲ್ಲಿ ಸ್ವತಂತ್ರವಾಗಿ ತಿರುಗಬಲ್ಲವು. ಚಪ್ಪಟೆಮೀನುಗಳ ಹೆಚ್ಚಿನ ವಿವರಗಳಿಗೆ 			(ನೋಡಿ- ಟರ್ಬಟ್) 
(ನೋಡಿ- ನಂಗು)	
(ನೋಡಿ- ಫ್ಲೌಂಡರ್)									(ಆರ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ